ನಂದಾದೇವಿ
	ಹಿಮಾಲಯ ಪರ್ವತ ಶ್ರೇಣಿಯ ಒಂದು ಶಿಖರ. ಎತ್ತರ 7,816 ಮೀ. ಉತ್ತರ ಪ್ರದೇಶ ರಾಜ್ಯದ ಗಢವಾಲ್ ಜಿಲ್ಲೆಯಲ್ಲಿ, ಉ. ಅ.33 22` ಮತ್ತು ಪೂ.ರೇ. 80(  ಮೇಲೆ ಇದೆ. ಕಂದು ಬಣ್ಣದ ಶಿಲೆಯ ಮೇಲೆ ಹಿಮವನ್ನು ಚೆಲ್ಲಿರುವಂತೆ ದೂರಕ್ಕೆ ಗೋಚರಿಸುವ ಈ ಶಿಖರ, ಕೋಟೆಯಂತಿರುವ ಸು. 112 ಕಿಮೀ. ಸುತ್ತಳತೆಯಲ್ಲಿ ಹರಡಿದ ಪರ್ವತಗಳ ಮಧ್ಯದಲ್ಲಿದೆ. ಇವುಗಳ ಸರಾಸರಿ ಎತ್ತರ 6,096 ಮೀ. 1934ರಲ್ಲಿ ಪ್ರಥಮ ಬಾರಿಗೆ ಈ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಯಿತು. 1936ರಲ್ಲಿ ಪ್ರಪ್ರಥಮವಾಗಿ ಎನ್.ಇ.ಔಡೆಲ್ ಮತ್ತು ಎಚ್. ಡಬ್ಲ್ಯು. ಟಿಲ್‍ಮನ್ ಎಂಬುವರು ಈ ಶಿಖರವನ್ನು ಏರಿದರು. ಈ ಶಿಖರ ಮತ್ತು ಇದರ ಸುತ್ತಮುತ್ತಲಿನ ಪ್ರದೇಶ ಬಹುವಾಗಿ ಗ್ರ್ಯಾನೈಟ್ ಮತ್ತು ನೈಸ್ ಶಿಲೆಗಳಿಂದಾದ್ದು. ಈ ಶಿಖರವನ್ನು ಹಿಂದುಗಳು ಪವಿತ್ರ ಸ್ಥಾನವೆಂದು ಪರಿಗಣಿಸುತ್ತಾರೆ. ಶಂಕರನ ಪತ್ನಿ ನಂದಾದೇವಿಯ ಆವಾಸಸ್ಥಾನವೆಂದು ಅವರು ನಂಬುತ್ತಾರೆ. ಶಿಖರದ ತುದಿಯಲ್ಲಿ ಮೋಡವಿರುವಾಗ ಗಾಳಿಯ ಬಡಿತದಿಂದ ಹೊಗೆ ಮೇಲೇಳಿದಂತೆ ಕಾಣುತ್ತದೆ. ಇದನ್ನು ಅಲ್ಲಿಯ ಜನ ನಂದಾದೇವಿ ದೇವತೆಯ ಅಡುಗೆ ಮನೆಯಿಂದ ಹೊರಟ ಹೊಗೆ ಎಂದು ಹೇಳುತ್ತಾರೆ. ಈಗಲೂ 12 ವರ್ಷಗಳಿಗೊಮ್ಮೆ ನಂದಾದೇವಿಯ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ ಯಾತ್ರಿಕರು ಈ ಶಿಖರದ ಸಮೀಪದ ಗಂಗಾನದೀ ಮೂಲವನ್ನು ಪೂಜಿಸಲು ಬರುತ್ತಾರೆ.

	ನಂದಾದೇವಿ ಶಿಖರದ ಸುತ್ತಣ ಗಿರಿಸಮೂಹದಲ್ಲಿ ಅಲ್ಲಲ್ಲಿ ಕೆಲವು ಜಾತಿಯ ಮರಗಳು, ಪೊದೆಗಳು ಬೆಳೆದಿವೆ. ಈ ಬೆಟ್ಟಗುಡ್ಡಗಳ ನಡುವೆ v ಮತ್ತು u ಆಕಾರದ ಕಣಿವೆಗಳಿವೆ. ಅಲ್ಲಲ್ಲಿ ಹುಲ್ಲು ಮತ್ತು ಕೆಲವು ಜಾತಿಯ ಹೂವುಗಳುಂಟು. ಅಲ್ಲಲ್ಲಿ ಜನರು ಕುರಿ ಮೇಕೆಗಳನ್ನು ಸಾಕುತ್ತಾರೆ. ಈ ಪ್ರದೇಶ ವರ್ಷದ ಹೆಚ್ಚು ಕಾಲ ಹಿಮದಿಂದ ಕೂಡಿರುತ್ತದೆ. ಗಂಗೋತ್ರಿ ಮತ್ತು ಕೇದಾರನಾಥ ಇವು ಇಲ್ಲಿಯ ಮುಖ್ಯ ಹಿಮನದಿಗಳು. ದೇವಿಯ ಸಮೀಪದಲ್ಲಿ ನಂದಾ ಧವಳ ಗಂಗಾನದಿ ಹರಿಯುತ್ತದೆ.
(ಆರ್.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ